ಜಲ್ಲಿ -
ಬಂಡೆಯನ್ನು ಒಡೆದು ಮಾಡಿದ ಮತ್ತು ಸುಮಾರು 4,75, ಮಿ.ಮೀ. ರಿಂದ 150 ಮಿ.ಮೀ ಗಾತ್ರದ ಚೂರುಗಳು. ಜಲ್ಲಿಯನ್ನು ಮುಖ್ಯವಾಗಿ ಕಾಂಕ್ರೀಟಿನಲ್ಲಿ ಸ್ಥೂಲ ಸಮಷ್ಟಿಯಾಗಿ ಉಪಯೋಗಿಸುವರು. ಕಾಂಕ್ರೀಟಿನ ಯಾವ ರಾಸಾಯನಿಕ ಕ್ರಿಯೆಯಲ್ಲೂ ಇದು ಭಾಗವಹಿಸದೆ ನಿಷ್ಕ್ರಿಯವಾಗಿದ್ದು ಅದರ ದ್ರವ್ಯರಾಶಿಯನ್ನು ಬಹಳ ಹೆಚ್ಚಿಸುತ್ತದೆ ಮತ್ತು ಬಂಧನ ವಸ್ತುವಿನ ಪದರ ಹರಡಲು ಮತ್ತು ಮೆತ್ತಿಕೊಳ್ಳಲು ಅಗತ್ಯವಾದ ಮೇಲ್ಮೈ ವಿಸ್ತೀರ್ಣವನ್ನು ಒದಗಿಸುತ್ತದೆ. ಸವೆತ ಹೆಚ್ಚಾಗಿ ಇರುವ ನೆಲ, ರಸ್ತೆ ಮುಂತಾದವುಗಳ ಮೇಲ್ಮೈಗೆ ಕಲ್ಲು ಜಲ್ಲಿಯನ್ನು ಬಳಸುತ್ತಾರೆ. ಕಾಂಕ್ರೀಟಿನ ಸಾಮಥ್ರ್ಯ ಅದರಲ್ಲಿ ಬಳಸುವ ಜಲ್ಲಿಕಲ್ಲಿನ ಗುಣಗಳನ್ನು ಸಹ ಅವಲಂಬಿಸಿದೆ. ಗಟ್ಟಿತನ, ಸಾಂದ್ರತೆ, ರಂಧ್ರರಾಹಿತ್ಯ, ನುಣುಪಿಲ್ಲದ ಬಿರುಸಾಗಿರುವ ಮೇಲ್ಮೈ ಮುಂತಾದ ಗುಣಗಳು ಉತ್ತಮ ಕಾಂಕ್ರೀಟು ಪಡೆಯಲು ಸಹಕಾರಿ. ಹೀಗಾಗಿ ಚಪ್ಪಟೆಯಾಗಿರುವ ಜಲ್ಲಿ ಉಪಯುಕ್ತವಲ್ಲ. ಗ್ರ್ಯಾನೈಟ್, ಬಸಾಲ್ಟ್, ಕ್ವಾಟ್ರ್ಸೈಟ್ ಮುಂತಾದವು ಜಲ್ಲಿ ಪಡೆಯಲು ಉತ್ತಮ ಕಲ್ಲುಗಳು. ಯಂತ್ರದ ಸಹಾಯದಿಂದ ಅಥವಾ ಕೈಸುತ್ತಿಗೆಗಳಿಂದ ಈ ಕಲ್ಲುಗಳನ್ನು ಒಡೆದು ಜಲ್ಲಿ ಪಡೆಯಬಹುದು. ಬಳಿಕ ಇವನ್ನು ಜಾಲರಿಯ ಸಹಾಯದಿಂದ ವಿವಿಧ ಶ್ರೇಣಿಗಳಾಗಿ ವರ್ಗೀಕರಿಸಬೇಕು. ಉಪಯೋಗವನ್ನು ಅನುಸರಿಸಿ ಜಲ್ಲಿಯ ಅಳತೆ ಬೇರೆ ಬೇರೆ ಇರುತ್ತದೆ. ಮೇಲ್ಚಾವಣಿ ಮುಂತಾದ ಕೆಲಸಗಳಿಗೆ ಸುಮಾರು 19 ಮಿ.ಮೀ ಅಳತೆಯ ಜಲ್ಲಿಕಲ್ಲು ಸಾಕು. ಇದನ್ನು ಬೇಬಿ ಜಲ್ಲಿ ಎಂದು ಕರೆಯುವುದು ವಾಡಿಕೆ.  ಅಡಿಪಾಯಗಳಿಗೆ ಇದಕ್ಕಿಂತ ದೊಡ್ಡದಾದ ಸುಮಾರು 40ಮಿ.ಮೀ ಅಳತೆಯ ಜಲ್ಲಿ ಬೇಕಾಗುವುದು.
(ಕೆ.ಆರ್.ಎಂ.ಓ.)
ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ